Skip to main content
Video
webstory

ಅಮೆರಿಕದಲ್ಲಿ ತುಮಕೂರು ಮೂಲದ ವಿದ್ಯಾರ್ಥಿ ನಾಪತ್ತೆ: ಐದು ದಿನ ಕಳೆದರೂ ಸಿಗದ ಸುಳಿವು; ಪೋಷಕರಲ್ಲಿ ಹೆಚ್ಚಿದ ಆತಂಕ

By Bhavana Gowda
ಅಮೆರಿಕದಲ್ಲಿ ತುಮಕೂರು ಮೂಲದ ವಿದ್ಯಾರ್ಥಿ ನಾಪತ್ತೆ: ಐದು ದಿನ ಕಳೆದರೂ ಸಿಗದ ಸುಳಿವು; ಪೋಷಕರಲ್ಲಿ ಹೆಚ್ಚಿದ ಆತಂಕ

ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದ ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಯೊಬ್ಬರು ಕಳೆದ ಐದು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ಕ್ಯಾಲಿಫೋರ್ನಿಯಾ/ಬೆಂಗಳೂರು: ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದ ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಯೊಬ್ಬರು ಕಳೆದ ಐದು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ತುಮಕೂರು ಮೂಲದ ಸಾಕೇತ್ ಶ್ರೀನಿವಾಸಯ್ಯ (22) ನಾಪತ್ತೆಯಾದ ದುರ್ದೈವಿ. ಈ ಘಟನೆ ಅಮೆರಿಕದ ಅನಿವಾಸಿ ಕನ್ನಡಿಗರಲ್ಲಿ ಹಾಗೂ ಸಾಕೇತ್ ಕುಟುಂಬಸ್ಥರಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ.

ಘಟನೆಯ ಹಿನ್ನೆಲೆ:

ಕ್ಯಾಲಿಫೋರ್ನಿಯಾ ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಸಾಕೇತ್, ಫೆಬ್ರವರಿ 9 ರಿಂದ ಕಾಣೆಯಾಗಿದ್ದಾರೆ. ಇವರನ್ನು ಕೊನೆಯ ಬಾರಿಗೆ ವಿಶ್ವವಿದ್ಯಾಲಯದ ಕ್ಯಾಂಪಸ್‌ನಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿ ನೋಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪತ್ತೆಯಾದ ಬ್ಯಾಗ್ ಮತ್ತು ಲ್ಯಾಪ್‌ಟಾಪ್:

ಸಾಕೇತ್ ನಾಪತ್ತೆಯಾದ ನಂತರ ಅವರ ನಿವಾಸದ ಸಮೀಪವಿರುವ ಟಿಲ್ಡೆನ್ ಪ್ರಾದೇಶಿಕ ಉದ್ಯಾನವನದ ಬಳಿ ಅವರ ಪಾಸ್‌ಪೋರ್ಟ್ ಮತ್ತು ಲ್ಯಾಪ್‌ಟಾಪ್ ಇದ್ದ ಬ್ಯಾಗ್ ಪತ್ತೆಯಾಗಿದೆ. ಆದರೆ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ.

ಸಂಪರ್ಕ ಕಡಿತಗೊಂಡಿದ್ದು ಹೇಗೆ?

ಭಾನುವಾರದವರೆಗೆ ಸಾಕೇತ್ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಾಮಾನ್ಯವಾಗಿಯೇ ಸಂಪರ್ಕದಲ್ಲಿದ್ದರು. ಸೋಮವಾರ ರಾತ್ರಿ ಸಾಕೇತ್ ಅವರೇ ಸ್ವತಃ ತಾಯಿಗೆ ಕರೆ ಮಾಡಿದ್ದರು. ಅದಾದ ನಂತರ ತಾಯಿ ಮರಳಿ ಕರೆ ಮಾಡಿದಾಗ ಸಾಕೇತ್ ಫೋನ್ ಸ್ವೀಕರಿಸಿಲ್ಲ, ನಂತರ ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲ.

ಸಾಕೇತ್ ಅವರ ಶೈಕ್ಷಣಿಕ ಸಾಧನೆ:

ಸಾಕೇತ್ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಅವರ ಶೈಕ್ಷಣಿಕ ಹಿನ್ನೆಲೆ ಇಲ್ಲಿದೆ:

ಬೆಂಗಳೂರು: ಶ್ರೀ ವಾಣಿ ಎಜುಕೇಶನ್ ಸೆಂಟರ್‌ನಲ್ಲಿ ಶಾಲಾ ಶಿಕ್ಷಣ.

ಬೇಸ್‌ ಪಿಯು ಕಾಲೇಜು: ಪದವಿ ಪೂರ್ವ ಶಿಕ್ಷಣ.

ಐಐಟಿ ಚೆನ್ನೈ: ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿ.

ಬರ್ಕ್ಲಿ ವಿಶ್ವವಿದ್ಯಾಲಯ: ಪ್ರಸ್ತುತ 'ಪ್ರಾಡಕ್ಟ್ ಡೆವಲಪ್‌ಮೆಂಟ್ ಪ್ರೋಗ್ರಾಮ್' ಅಡಿಯಲ್ಲಿ ಮಾಸ್ಟರ್ಸ್ ಮಾಡುತ್ತಿದ್ದರು.

ರಾಯಭಾರ ಕಚೇರಿಯ ನೆರವು:

ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಸ್ಥಳೀಯ ಪೊಲೀಸರು ಮತ್ತು ಅನಿವಾಸಿ ಭಾರತೀಯ ಸಂಘಟನೆಗಳೊಂದಿಗೆ ಸೇರಿ ಹುಡುಕಾಟ ನಡೆಸಲಾಗುತ್ತಿದೆ. ಸದ್ಯ ಕ್ಯಾಲಿಫೋರ್ನಿಯಾದಲ್ಲಿರುವ ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಸಾಕೇತ್ ಪತ್ತೆಗೆ ಮುಂದಾಗಿದ್ದಾರೆ.

ವ್ಯಕ್ತಿ ಗುರುತು:

ಎತ್ತರ: 6 ಅಡಿ 1 ಇಂಚು.

ಮಾಹಿತಿ ನೀಡಲು ಕೋರಿಕೆ: ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕರೂ ಕೂಡಲೇ ಅಧಿಕಾರಿಗಳಿಗೆ ಅಥವಾ ರಾಯಭಾರ ಕಚೇರಿಗೆ ತಿಳಿಸುವಂತೆ ಮನವಿ ಮಾಡಲಾಗಿದೆ.